ನರಸಿಂಹರಾಜು
	1926-1979. ಕನ್ನಡ ರಂಗಭೂಮಿ ಹಾಗೂ ಕನ್ನಡ ಚಲನಚಿತ್ರ ಜಗತ್ತಿನ ಹಾಸ್ಯನಟ. ಹುಟ್ಟಿದ್ದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ. ತಂದೆ ರಾಮರಾಜು ಪೊಲೀಸ್ ಇಲಾಖೆಯ ನೌಕರ. ಚಿಕ್ಕಪ್ಪ ಲಕ್ಷ್ಮೀಪತಿರಾಜುವಿನ ಪ್ರೋತ್ಸಾಹದಿಂದ ಚಿಕ್ಕಂದಿನಲ್ಲಿಯೇ ರಂಗಭೂಮಿ ಪ್ರವೇಶಿಸಿ ಸಿ.ಬಿ. ಮಲ್ಲಪ್ಪನವರ ಚಂದ್ರಮೌಳೇಶ್ವರ ನಾಟಕ ಕಂಪನಿಯಲ್ಲಿ ಖ್ಯಾತ ಬಾಲನಟನೆನಿಸಿದ ಇವರು ಲೋಹಿತಾಶ್ವ, ಪ್ರಹ್ಲಾದ, ಕೃಷ್ಣ ಇತ್ಯಾದಿ ಬಾಲಪಾತ್ರಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದರು. ಮೊದಲು ಗಂಭೀರ ಪಾತ್ರಗಳನ್ನೇ ಮಾಡುತ್ತಿದ್ದರಾದರೂ ಅಕಸ್ಮಾತ್ತಾಗಿ ಹಾಸ್ಯಪಾತ್ರ ನಿರ್ವಹಿಸಬೇಕಾಗಿ ಬಂದಾಗ ಅದೇ ಗಟ್ಟಿಯಾಗಿ ಅಂಟಿ ನಿಂತಿತು. ಇವರ ದೈಹಿಕ ವಿನ್ಯಾಸವೂ ಅದಕ್ಕೆ ಪೋಷಕವಾಯಿತು. ಕರ್ನಾಟಕದ ಬಹುತೇಕ ನಾಟಕಮಂಡಳಿಗಳಲ್ಲಿ ಕೆಲಸಮಾಡಿ ಅಪಾರ ಅನುಭವವಿದ್ದ ಇವರು ಕೆಲವು ಸಹುದ್ಯೋಗಿಗಳೊಂದಿಗೆ ಸ್ವಂತ ಕಂಪನಿಯನ್ನು (1942) ಕಟ್ಟಿ ಗೋರ ಕುಂಬಾರ, ಹರಿಶ್ಚಂದ್ರ ಮುಂತಾದ ನಾಟಕಗಳನ್ನಾಡಿದರು. ಆ ಕಾಲದಲ್ಲಿ ಖ್ಯಾತವಾಗಿದ್ದು ಆರ್ಥಿಕವಾಗಿ ಸುಭದ್ರವಾಗಿದ್ದ ಕೃಷ್ಣರಾಜನಗರದ ಎಡತೊರೆ ಕಂಪನಿಗೆ ಸೇರಿ (1945) ವಿಶ್ವಾಮಿತ್ರ, ರಾಮರಾವಣ, ಬೇಡರ ಕಣ್ಣಪ್ಪ ಮುಂತಾದ ನಾಟಕಗಳಲ್ಲಿ ಪಾತ್ರವಹಿಸಿದರು. ಬೇಡರ ಕಣ್ಣಪ್ಪದ ಬಹುಜನಪ್ರಿಯ ಕಾಶಿ ಪಾತ್ರದಲ್ಲಿ ಇವರು ಸಾವಿರಕ್ಕೂ ಹೆಚ್ಚು ಬಾರಿ ಕಾಣಿಸಿಕೊಂಡಿದ್ದಾರೆ. ಕೆ. ಹಿರಣ್ಣಯ್ಯನವರ ಕಂಪನಿಯಲ್ಲಿ ಸ್ವಲ್ಪಕಾಲ ಸ್ತ್ರೀಪಾತ್ರಾಭಿನಯ ಮಾಡುತ್ತಿದ್ದು ಅನಂತರ ಇವರು ಕರ್ನಾಟಕ ನಾಟಕ ಸಭಾಕ್ಕೆ ಚಲಿಸಿ ಅಲ್ಲಿ ಹಾಸ್ಯಪಾತ್ರಗಳನ್ನು ಮಾಡತೊಡಗಿದರು. ಆಮೇಲೆ ಧರ್ಮಸ್ಥಳದ ನಟರಾಜ ನಾಟ್ಯಮಂಡಳಿ, ಬೇಲೂರು ಗುಂಡಾ ಜೋಯಿಸರ ಕಂಪನಿಗಳಲ್ಲೂ ಪಾತ್ರವಹಿಸಿದರು. ಹುಣಸೂರು ಕೃಷ್ಣಮೂರ್ತಿಯವರಿಂದ ರಚಿತವಾಗಿದ್ದ ಧರ್ಮರತ್ನಾಕರದಲ್ಲಿ ನಾಣಿಯ ಪಾತ್ರ ಯಶಸ್ಸು ಗಳಿಸಿತು. ಗುಬ್ಬಿ ಕಂಪನಿ ಇವರನ್ನು ಆಹ್ವಾನಿಸಿತು. ವೀರಣ್ಣನವರ ಗರಡಿಯಲ್ಲಿ ಇವರು ಸಾಕಷ್ಟು ಪಳಗಿದರು; ಸಾಹುಕಾರ ನಾಟಕದ ಆಚಾರಿ, ಸದಾರಮೆಯ ಆದಿಮೂರ್ತಿ ಪಾತ್ರಗಳಲ್ಲಿ ತಮ್ಮ ಹಾಸ್ಯಪ್ರತಿಭೆಯನ್ನು ಮೆರೆದರು.

	ವೀರಣ್ಣನವರು ಗುಬ್ಬಿ ಕರ್ನಾಟಕ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮದರಾಸಿನ ಪ್ರಸಿದ್ಧ ಎ.ವಿ.ಎಂ. ಚಿತ್ರಸಂಸ್ಥೆಯೊಂದಿಗೆ ಸೇರಿ ತಮ್ಮ ಜನಪ್ರಿಯ ಬೇಡರ ಕಣ್ಣಪ್ಪ ನಾಟಕವನ್ನು ಚಲನಚಿತ್ರ (1954) ಮಾಡಿದಾಗ ಇವರ ಅಭಿನಯ ಜೀವನದ ಇನ್ನೊಂದು ಮಗ್ಗುಲು ತೆರೆದುಕೊಂಡಿತು. ಎಚ್.ಎಲ್.ಎನ್. ಸಿಂಹರ ನಿರ್ದೇಶನದಲ್ಲಿ ಕಾಶಿ ಪಾತ್ರದಲ್ಲಿ ಕಾಣಿಸಿಕೊಂಡ ಇವರಿಗೆ ಈ ಚಿತ್ರ ಒಳ್ಳೆಯ ಹೆಸರು ತಂದುಕೊಟ್ಟಿತು. ಅಂದಿನಿಂದ ಇಲ್ಲಿಯವರೆಗೆ ಇವರು ಅಭಿನಯಿಸಿದ ಚಿತ್ರಗಳ ಸಂಖ್ಯೆ ನೂರಕ್ಕೂ ಮಿಕ್ಕಿದೆ. ಇಪ್ಪತ್ತಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದರು. ಇವರ ಕೆಲವು ಪ್ರಮುಖ ಚಿತ್ರಗಳೆಂದರೆ- ಭಕ್ತ ಮಲ್ಲಿಕಾರ್ಜುನ (1955), ಭಕ್ತ ಮಾರ್ಕಂಡೇಯ (1956), ಅಣ್ಣ ತಂಗಿ (1958), ರಣಧೀರ ಕಂಠೀರವ (1960), ಮಕ್ಕಳ ರಾಜ್ಯ (1960), ದಶಾವತಾರ (1960), ಜೇನುಗೂಡು (1963), ಅಮರಶಿಲ್ಪಿ ಜಕಣಾಚಾರಿ (1964), ಮಿಸ್ ಲೀಲಾವತಿ (1965). ಇವರ ನೂರನೆಯ ಚಿತ್ರವಾದ ನಕ್ಕರೆ ಅದೇ ಸ್ವರ್ಗಕ್ಕೆ ರಾಜ್ಯಪ್ರಶಸ್ತಿಯೂ ಬಂದಿದೆ (1967).

	ಸಹಕಲಾವಿದರಾದ ರಾಜಕುಮಾರ್, ಜಿ.ವಿ.ಐಯ್ಯರ್ ಮತ್ತು ಬಾಲಕೃಷ್ಣರ ಜೊತೆಗೂಡಿ ಕನ್ನಡ ಚಲನಚಿತ್ರ ಕಲಾವಿದರ ಸಂಘವನ್ನು ಸಂಘಟಿಸಿ ಕನ್ನಡ ನಾಡಿನಲ್ಲಿ ಅನೇಕ ನಾಟಕಗಳನ್ನು ಪ್ರದರ್ಶಿಸಿದರು. ಈ ಸಂಘದ ಸ್ವಂತ ನಿರ್ಮಾಣವಾದ ರಣಧೀರ ಕಂಠೀರವ (1960) ಚಿತ್ರ ಅದ್ಭುತ ಯಶಗಳಿಸಿತು. ಒಂದು ಕಾಲದಲ್ಲಿ ಕನ್ನಡ ಚಿತ್ರಗಳಿಗೆ ಅನಿವಾರ್ಯವಾಗಿದ್ದ ಇವರು ತಮ್ಮ ನಟನೆ, ಮುಖಭಂಗಿ, ಸಂಭಾಷಣೆ, ಮಾತಿನಧಾಟಿ-ಇವುಗಳಿಂದಲೇ ನಗೆಯುಕ್ಕಿಸುತ್ತಿದ್ದರು. ಇವರ ಹಾಗೂ ಬಾಲಕೃಷ್ಣರ ಹಾಸ್ಯಜೋಡಿ ಬಹುಕಾಲ ಬಾಳಿಬಂದ, ಕನ್ನಡ ತೆರೆಯ ವಿಶಿಷ್ಟ ನಗೆಜೋಡಿ, ಶ್ರೀಕಾಂತ್ ಪ್ರೊಡಕ್ಷನ್ಸ್ ಎಂಬ ಲಾಂಛನದ ಸ್ವಂತ ನಿರ್ಮಾಣ ಸಂಸ್ಥೆಯ ಮೂಲಕ ಇವರು ಹೊರತಂದಿರುವ ಪ್ರೊಫೆಸರ್ ಹುಚ್ಚೂರಾಯ ಚಿತ್ರದಲ್ಲಿ ಇವರದೇ ಪ್ರಧಾನ ಪಾತ್ರ (1974).						
				(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ